ಆತ್ಮಹತ್ಯೆ ಮಾಡಿಕೊಂಡ ರೈತನ ಮೃತದೇಹ ಎದುರು ನಿಂತು ಪೋಟೋ ಶೂಟ್ ಮಾಡಿಕೊಂಡಿದ್ದಲ್ಲದೆ, ಆ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ ಗೆ ಹಾಕುವ ಮೂಲಕ ವಿವಾದ ಸೃಷ್ಟಿಸಿದ ಜೆಡಿಎಸ್ ಶಾಸಕ.
ಶಿರಾ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ ಅವರೇ ವಿವಾದ ಮೈಮೇಲೆ ಎಳೆದುಕೊಂಡವರು. ದೇವರಹಳ್ಳಿಯಲ್ಲಿ ರೈತ ಗಂಗಾಧರ್ (60) ಎಂಬಾತ ಸಾಲಭಾದೆಯಿಂದ ತಮ್ಮ ಜಮೀನಿನಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕೆಲವು ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಿರಾ ಶಾಸಕ ಸತ್ಯನಾರಾಯಣ್, ಆ ನೇಣು ಬಿಗಿದ ಸ್ಥಿತಿಯಲ್ಲಿದ್ದ ರೈತನ ಶವದ ಎದುರು ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಅವರೊಂದಿಗೆ ಇನ್ನೂ ಕೆಲವು ಅಧಿಕಾರಿಗಳೂ ಇರುವುದನ್ನು ನೋಡಬಹುದು.
ಆ ಫೋಟೋವನ್ನು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಶಾಸಕರು, ‘ಸಾಲಭಾದೆಯಿಂದ ಮೃತಪಟ್ಟ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ನೀಡಿದ್ದೇನೆ. ಸರ್ಕಾರದಿಂದ ಬರಬೇಕಾದ ಪರಿಹಾರವನ್ನು ದೊರಕಿಸಿಕೊಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಲಾಯಿತು” ಎಂದು ಬರೆದುಕೊಂಡಿದ್ದರು.
ಆದರೆ ರೈತನ ಶವದ ಎದುರು ಪೋಟೋ ಶೂಟ್ ಮಾಡಿಕೊಂಡ ಶಾಸಕರ ಕ್ರಮ ತೀವ್ರ ಟೀಕೆಗೆ ಗುರಿಯಾಗಿತ್ತು. ಇದರಿಂದ ಅವರು ಪೋಸ್ಟ್ ಡಿಲೀಟ್ ಮಾಡಿದ್ದರು, ಆ ಫೋಟೋ ಇಲ್ಲಿದೆ ನೋಡಿ.