fbpx

ಬೈಕ್ ಸವಾರನ ಆತುರಕ್ಕೆ ರೈಲಿಗೆ ಸಿಕ್ಕು ಪುಡಿಪುಡಿಯಾಗಿ ಹೋಯಿತು ಬೈಕ್, ವೈರಲ್ ವಿಡಿಯೋ ನೋಡಿ

ರೈಲ್ವೆ ಹಳಿಗಳ ಸಮೀಪ ಅಪಘಾತಗಳು ಭಾರತದಲ್ಲಿ ಯಾವಾಗಲೂ ಒಂದು ಸಾಮಾನ್ಯ ಘಟನೆಯಾಗಿದೆ, ಏಕೆಂದರೆ ಜನರು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಎಂದಿಗೂ ಗಂಭೀರವಾಗಿ ಪರಿಗಣಿಸುವುದಿಲ್ಲ. ನೆರೆಯ ಆಂಧ್ರಪ್ರದೇಶದಲ್ಲಿ ಬೈಕ್ ಸವಾರನ ನಿರ್ಲಕ್ಷ್ಯವು ಇಂತಹದ್ದೇ ಅಪಘಾತಕ್ಕೆ ಸಾಕ್ಷಿಯಾಗಿದೆ.

ಆಂಧ್ರಪ್ರದೇಶದ ಪೂರ್ವ ಗೋದಾವರಿಯ ರಾಜಮಂಡ್ರಿಯಲ್ಲಿ ನಡೆದ ಅಪಘಾತದ ದೃಶ್ಯವೊಂದು ಇದೀಗ ವೈರಲ್ ಆಗುತ್ತಿದೆ. ಬೈಕ್‌ ಸವಾರನೊಬ್ಬ ರೈಲ್ವೆ ಗೇಟ್ ಹಾಕಿದ್ದರೂ ಗೇಟ್ ದಾಟಿ ಮುನ್ನುಗ್ಗುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸವಾರನು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಮೂಲಕ ರೈಲ್ವೆ ಕ್ರಾಸಿಂಗ್ ಅನ್ನು ತರಾತುರಿಯಲ್ಲಿ ದಾಟಲು ಪ್ರಯತ್ನಿಸಿದ್ದಾನೆ. ಆಗಲೇ ವೇಗವಾಗಿ ರೈಲು ಆಗಮಿಸಿದ್ದು, ಬೈಕ್ ಸವಾರ ಏಕಾಏಕಿ ಬೈಕ್‌ನ ಬ್ರೇಕ್ ಹಾಕಿದ್ದಾನೆ. ಆದರೆ ಆತನ ಅದೃಷ್ಟ ಕೈಕೊಟ್ಟಿದೆ, ಬೈಕ್‌ನ ನಿಯಂತ್ರಣವನ್ನು ಕಳೆದುಕೊಂಡು ರೈಲ್ವೇ ಹಳಿ ಪಕ್ಕದಲ್ಲೇ ಮಗುಚಿ ಬಿದ್ದಿದೆ.

ತಡವಾಗಿರುವುದನ್ನು ಅರಿತ ಸವಾರ ಬೈಕನ್ನು ಅಲ್ಲೇ ಬಿಟ್ಟು ಹಿಂದೆ ಓಡಿ ಹೋಗಿದ್ದಾನೆ. ಇದಾದ ಕೆಲವೇ ಸೆಕೆಂಡ್‌ಗಳಲ್ಲಿ ಅಲ್ಲಿಗೆ ಆಗಮಿಸಿದ ಎಕ್ಸ್-ಪ್ರೆಸ್ ರೈಲು ಬೈಕ್‌ ಮೇಲೆ ನುಗ್ಗಿ ಅದನ್ನು ಪುಡಿಪುಡಿ ಮಾಡಿ ಹಾಕಿದೆ. ಈ 30 ಸೆಕೆಂಡುಗಳ ಭಯಾನಕ ಸಿಸಿಟಿವಿ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಸಿಟಿವಿ ದೃಶ್ಯಾವಳಿಗಳು ಈಗ ವೈರಲ್ ಆಗಿವೆ. ವಿಡಿಯೋ ನೋಡಿದ ಅನೇಕರು ಬೈಕರ್‌ನ ನಡವಳಿಕೆಯನ್ನು ಟೀಕಿಸುತ್ತಿದ್ದಾರೆ. ಸ್ವಲ್ಪ ಅದೃಷ್ಟ ಕೈಕೊಟ್ಟಿದ್ದರೂ ಬೈಕ್ ಸವಾರನೂ ಸಾವನ್ನಪ್ಪುವ ಸಾಧ್ಯತೆ ಇತ್ತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

error: Content is protected !!