ಕರೋನಾ ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಕನ್ನಡ ಚಿತ್ರೋದ್ಯಮದ ಕೆಲಸಗಳು ಮತ್ತೆ ಪ್ರಾರಂಭಗೊಂಡಿದೆ. ಅರ್ಧಕ್ಕೆ ನಿಂತಿದ್ದ ಬಹು ನಿರೀಕ್ಷಿತ ‘ಕೆಜಿಎಫ್ ಚಾಪ್ಟರ್ 2’ ಚಿತ್ರೀಕರಣಕ್ಕೂ ಮತ್ತೆ ಚಾಲನೆ ನೀಡಲಾಗಿದೆ. ಆದರೆ ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆ ‘ಕೆಜಿಎಫ್’ ಚಿತ್ರತಂಡದ ವಿರುದ್ಧ ಕನ್ನಡ ಸಿನಿ ಅಭಿಮಾನಿಗಳು ಗರಂ ಆಗಿದ್ದಾರೆ. ವಿವಾದಗಳಿಂದಲೇ ಹೆಸರಾಗಿರುವ ‘ಪ್ರಕಾಶ್ ರಾಜ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರೋದೆ ಇದಕ್ಕೆಲ್ಲ ಕಾರಣ.
‘ಕೆಜಿಎಫ್ ಚಾಪ್ಟರ್ 1’ ರಲ್ಲಿ ಅಭಿನಯಿಸಿ ಭಾರೀ ಮೆಚ್ಚುಗೆ ಗಳಿಸಿದ್ದ ಅನಂತ್ನಾಗ್ ಅವರ ಬದಲಿಗೆ ವಿವಾದಾತ್ಮಕ ನಟ ‘ಪ್ರಕಾಶ್ ರಾಜ್’ ಅವರನ್ನು ಚಿತ್ರತಂಡ ಹಾಕಿಕೊಂಡಿದೆ. ಚಿತ್ರತಂಡದ ಜೊತೆ ಮನಸ್ತಾಪ ಆಗಿದ್ದರಿಂದ ಅನಂತ್ ನಾಗ್ ಅವರು ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ಈ ಹಿಂದೆಯೇ ಗುಸುಗುಸು ಕೇಳಿಬಂದಿತ್ತು, ಆದರೆ ಇದೀಗ ಅದಕ್ಕೆ ಸಾಕ್ಷಿಯೆಂಬಂತೆ ಅವರ ಜಾಗದಲ್ಲಿ ‘ಪ್ರಕಾಶ್ ರಾಜ್’ ಕಾಣಿಸಿಕೊಂಡಿದ್ದಾರೆ.
ಅನಂತ್ನಾಗ್ ಜಾಗದಲ್ಲಿ ವಿವಾದಾತ್ಮಕ ನಟ ಪ್ರಕಾಶ್ ರಾಜ್ರನ್ನು ನೋಡಿದ ಅಭಿಮಾನಿಗಳಿಗೆ ಅರಗಿಸಿಕೊಳ್ಳೋದು ಕಷ್ಟವಾಗಿದೆ. ಆದರೆ ಆ ಸುದ್ದಿಯನ್ನು ಇಲ್ಲಿಯವರೆಗೆ ಚಿತ್ರತಂಡದ ಯಾರೊಬ್ಬರೂ ಖಚಿತಪಡಿಸಿರಲಿಲ್ಲ. ಈಗ ಸಿನಿಮಾ ಚಿತ್ರೀಕರಣ ಪುನಾರಂಭಗೊಂಡಿದ್ದು, ಅನಂತ್ ನಾಗ್ ಜಾಗದಲ್ಲಿ ಬಹುಭಾಷಾ ನಟ ಕುಳಿತುಕೊಂಡಿರುವುದು ಗೊತ್ತಾಗಿದೆ.
ಸಿನಿಮಾ ಚಿತ್ರೀಕರಣದ ವೇಳೆ ಕ್ಲಿಕ್ಕಿಸಿದ ಕೆಲವು ಫೋಟೋಗಳನ್ನು ಮೊದಲು ಪ್ರಕಾಶ್ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು, ಇದೀಗ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರೂ ಕೂಡ ‘ಪ್ರಕಾಶ್ ರಾಜ್’ ಅವರು ಸಿನಿಮಾದಲ್ಲಿ ಅಭಿನಯಿಸುತ್ತಿರೋದನ್ನ ಖಚಿತಪಡಿಸಿದ್ದಾರೆ.
ಪ್ರಕಾಶ್ ರಾಜ್ ಬಿಜೆಪಿ ಹಾಗೂ ಪ್ರಧಾನಿ ಮೋದಿಯವರನ್ನು ಹಿಂದಿನಿಂದಲೂ ಟೀಕಿಸಿಕೊಂಡು ಬಂದಿದ್ದಾರೆ. ಹಲವು ಹಿಂದೂ ವಿರೋಧಿ ಸಮಾವೇಷಗಳಲ್ಲೂ ಭಾಗವಹಿಸಿದ್ದಾರೆ. ಇದರಿಂದ ಹಿಂದೂ ಕಾರ್ಯಕರ್ತರು, ಬಿಜೆಪಿ/ಮೋದಿ ಅಭಿಮಾನಿಗಳಿಗೆ ‘ಪ್ರಕಾಶ್ ರಾಜ್’ ಮೇಲೆ ಇನ್ನಿಲ್ಲದ ಸಿಟ್ಟಿದೆ. ಇದೀಗ ‘ಕೆಜಿಎಫ್’ ಚಿತ್ರತಂಡ ಅವರನ್ನು ಅನಂತ್ನಾಗ್ ಜಾಗದಲ್ಲಿ ಕೂರಿಸಿರೋದು ಅನಂತ್ನಾಗ್ ಸರ್ ಅಭಿಮಾನಿಗಳಿಗೂ ಕೋಪ ತರಿಸಿದೆ.
ಈ ಎಲ್ಲಾ ಕಾರಣಗಳಿಂದ ‘ಕೆಜಿಎಫ್ ಚಾಪ್ಟರ್ 2’ ಬಹಿಷ್ಕಾರ ಹಾಕಿ, ‘BoycottKGF2’ ಎಂದು ಸಾವಿರಾರು ಜನರು ಟ್ವೀಟ್ ಮಾಡಿದ್ದಾರೆ. ಫೇಸ್ಬುಕ್ನಲ್ಲೂ ಎಲ್ಲಿ ನೋಡಿದ್ರೂ ‘BoycottKGF’ ಕಾಣಸಿಗುತ್ತಿದೆ. ನಮಗೆ ಅನಂತ್ನಾಗ್ ಸರ್ ಬೇಕು ಪ್ರಕಾಶ್ ರಾಜ್ ಬೇಡ ಎಂದು ಅನೇಕರು ಪೋಸ್ಟ್ ಹಾಕಿದ್ದಾರೆ.
ನಾವು ಥಿಯೇಟರ್ಗೆ ಹೋಗಿ ನೋಡಲ್ಲ, ಯಶ್ ಸರ್ ಅವರ ಅಭಿನಯಕ್ಕಾಗಿ OTTಗಳಲ್ಲಿ ಸಿನಿಮಾ ನೋಡುತ್ತೇವೆ ಎಂದು ಅನೇಕರು ಹೇಳಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಫೇಸ್ಬುಕ್ ಪೋಸ್ಟ್ನಲ್ಲೂ ಅನೇಕರು ‘ಪ್ರಕಾಶ್ ರಾಜ್’ರನ್ನು ಸಿನಿಮಾದಿಂದ ತೆಗೆದು ಮತ್ತೆ ಅನಂತ್ನಾಗ್ ಸರ್ ಅವರನ್ನೇ ಹಾಕಿ ಎಂದು ಕಮೆಂಟ್ ಮಾಡಿದ್ದಾರೆ. ವಿವಾದಾತ್ಮಕ ನಟ ಪ್ರಕಾಶ್ ರಾಜ್ ಅವರನ್ನು ಹಾಕಿಕೊಂಡು ಚಿತ್ರತಂಡ ಅಡಕತ್ತರಿಯಲ್ಲಿ ಸಿಲುಕಿದೆ, ಮುಂದೆ ಏನಾಗುತ್ತೋ ನೋಡಬೇಕಿದೆ.