ಬ್ಯಾಂಕ್ ಕಳ್ಳತನ ಮಾಡಲು ಹೋದ ಕಳ್ಳನೊಬ್ಬ ಬ್ಯಾಂಕ್ನ ಲಾಕರ್ ರೂಮ್ನಲ್ಲಿಯೇ ಸತ್ತು ಹೋದ ಘಟನೆ ಗುಜರಾತ್ನ ವಡೋದರದಲ್ಲಿ ನಡೆದಿದೆ. ಕಳ್ಳನೊಬ್ಬ ಖಾಸಗಿ ಬ್ಯಾಂಕ್ ಒಂದಕ್ಕೆ ಕನ್ನ ಹಾಕಲು ತೆರಳಿದ್ದು, ಬ್ಯಾಂಕ್ನ ಸೇಪ್ಟಿ ಲಾಕರ್ ಕತ್ತರಿಸಲು ತೆಗೆದುಕೊಂಡು ಹೋಗಿದ್ದ ಎಲೆಕ್ಟ್ರಿಕ್ ಕಟ್ಟರ್ ಆತನ ಕುತ್ತಿಗೆಯನ್ನೇ ಕತ್ತರಿಸಿ ಹಾಕಿದೆ.
ಬೆಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ವಡೋದರದ ಹರ್ನಿ ರಸ್ತೆಯಲ್ಲಿರುವ ಶಾಖೆಯಲ್ಲಿ ಈ ಘಟನೆ ನಡೆದಿದೆ. ಶನಿವಾರ ರಾತ್ರಿ 12:45 ರಿಂದ 1:00 ಗಂಟೆಯ ನಡುವೆ ಎಲೆಕ್ಟ್ರಿಕ್ ಕಟ್ಟರ್ ಬಳಸಿ ಬ್ಯಾಂಕ್ ಒಳನುಸುಳಿದ ಕಳ್ಳ, ಅದೇ ಕಟ್ಟರ್ ಬಳಸಿ ಬ್ಯಾಂಕ್ನ ಸೇಪ್ಟಿ ವಾಲ್ಟ್(Safety vault) ಕತ್ತರಿಸಿದ್ದಾನೆ.
ಇನ್ನೇನು ವಾಲ್ಟ್ ಒಳಗಿದ್ದ ಹಣವನ್ನು ಕದಿಯಬೇಕು, ಏಕಾಏಕಿ ಆತ ತಂದಿದ್ದ ಎಲೆಕ್ಟ್ರಿಕ್ ಕಟ್ಟರ್ ಸ್ವಿಚ್ಆನ್ ಆಗಿ ಆತನ ಕುತ್ತಿಗೆಗೆ ಬಡಿದಿದೆ. ಆತನ ಕುತ್ತಿಗೆ ಕತ್ತರಿಸಿ ಹೋಗಿದ್ದು, ಸ್ಥಳದಲ್ಲೇ ನರಳಿ ಪ್ರಾಣಬಿಟ್ಟಿದ್ದಾನೆ. ಸೇಪ್ಟಿ ವಾಲ್ಟ್ನ ಹೊರ ಭಾಗದ ಪ್ರದೇಶ ಇಕ್ಕಟ್ಟಾಗಿದ್ದು, ಅಲ್ಲಿ ಒಬ್ಬ ವ್ಯಕ್ತಿ ನಿಂತುಕೊಳ್ಳಲು ಕೂಡ ಸ್ಥಳಾವಕಾಶ ಇರಲಿಲ್ಲ.
ಆ ಇಕ್ಕಟ್ಟಿನ ಪ್ರದೇಶದಲ್ಲಿ ಕಳ್ಳನಿಗೆ ಓಡಾಡೋಕು ಕಷ್ಟವಾಗಿದ್ದು, ಇದೇ ಸಂದರ್ಭದಲ್ಲಿ ಅಕಸ್ಮಾತ್ ಆಗಿ ಎಲೆಕ್ಟ್ರಿಕ್ ಕಟ್ಟರ್ನ ವೈರಲ್ ಎಳೆದಿದ್ದಾನೆ. ಇದರಿಂದಾಗಿ ಏಕಾಏಕಿ ಕಟ್ಟರ್ ಚಾಲು ಆಗಿ ಆತನ ಕುತ್ತಿಗೆಯನ್ನೇ ಕತ್ತರಿಸಿಹಾಕಿದೆ.
ಚೆನ್ನೈನಲ್ಲಿರುವ ಬ್ಯಾಂಕ್ನ ವಿಚಕ್ಷಣದಳದ ಸಿಬ್ಬಂದಿಗೆ ಬ್ಯಾಂಕ್ ಒಳಕ್ಕೆ ಕಳ್ಳ ನುಸುಳಿರೋದು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗೊತ್ತಾಗಿದ್ದು, ತಕ್ಷಣ ಬ್ಯಾಂಕ್ ಮ್ಯಾನೇಜರ್ಗೆ ಮಾಹಿತಿ ನೀಡಿದ್ದಾರೆ. ಮ್ಯಾನೇಜರ್ ಪೋಲೀಸರೊಂದಿಗೆ ಬ್ಯಾಂಕ್ಗೆ ಬರುವ ಹೊತ್ತಿಗೆ ಕಳ್ಳ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಪ್ರಾಣಬಿಟ್ಟಿದ್ದ.
ಕಳ್ಳನ ಬಳಿ ಕೆಲ ದಾಖಲೆಗಳು ಸಿಕ್ಕಿದ್ದು, ಆತನ ಕುಟುಂಬಸ್ಥರು ಬಂದ ಮೇಲಷ್ಟೇ ಆತನ ಬಗ್ಗೆ ಮಾಹಿತಿ ಗೊತ್ತಾಗಲಿದೆ. ಈ ಬಗ್ಗೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳನ ಕೊನೆಯ ಕ್ಷಣಗಳ ಸಿಸಿಟಿವಿ ದೃಶ್ಯಾವಳಿಗಳು ಇಲ್ಲಿದೆ ನೋಡಿ,
Watch Video
