fbpx

ವೃದ್ದೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಎತ್ತಿ ನೆಲಕ್ಕೆ ಎಸೆದ ಮಗ ಮತ್ತು ಮೊಮ್ಮಗ, ಬೆಚ್ಚಿಬೀಳಿಸುವ ವೀಡಿಯೋ

ವೃದ್ದೆಯ ಮೇಲೆ ಅಮಾನುಷವಾಗಿ ಪುತ್ರ, ಮೊಮ್ಮಗ ಇಬ್ಬರು ಸೇರಿ ಹಲ್ಲೆ ನಡೆಸಿದ ಘಟನೆ ಸವಣಾಲು ಗ್ರಾಮದ ಹಲಸಿನಕಟ್ಟೆಯಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ, ಮೊಮ್ಮಗ ಹಾಗೂ ವೀಡಿಯೋ ಮಾಡಿದ ಇನ್ನೋರ್ವ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ವಯೋವೃದ್ಧೆ ಅಪ್ಪಿ ಶೆಡ್ತಿಯವರ ಮೇಲೆ ಅವರ ಮೊಮ್ಮಗ ಪ್ರದೀಪ ಶೆಟ್ಟಿ ಹಾಗೂ ಮಗ ಶ್ರೀನಿವಾಸ ಶೆಟ್ಟಿ ಕಂಠಪೂರ್ತಿ ಕುಡಿದು ಅಮಾನುಷವಾಗಿ ವೃದ್ಧೆಯನ್ನು ಎತ್ತಿ ನೆಲಕ್ಕೆ ಹಾಕಿ, ಮುಖಕ್ಕೆ ಹೊಡೆದಿದ್ದಾನೆ. ಅಲ್ಲದೆ, ವೃದ್ದೆಯನ್ನು ಮನೆಯಿಂದ ಹೊರಹಾಕಿ, ಆಕೆ ಅಲ್ಲೇ ಸಾಯಲಿ ಎಂದು ಹೇಳಿದ್ದಾನೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಉಪನಿರೀಕ್ಷಕರಾದ ನಂದಕುಮಾರ್‌ ಅವರು, ಈ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಇದೀಗ ಆರೋಪಿ ಮೊಮ್ಮಗ ಪ್ರದೀಪ ಶೆಟ್ಟಿ, ಪುತ್ರ ಶ್ರೀನಿವಾಸ ಶೆಟ್ಟಿ ಹಾಗೂ ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳ ವಿರುದ್ಧ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ‌ ಹಾಗೂ ಹಲ್ಲೆ ಪ್ರಕರಣ ದಾಖಲು ಮಾಡಿದ್ದಾರೆ.

ಇದೀಗ ವೃದ್ಧೆಯನ್ನು ಆರೈಕೆಗಾಗಿ ಹಿರಿಯ ನಾಗರಿಕ ಪಾಲನಾ ಕೇಂದ್ರಕ್ಕೆ ರವಾನಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!