ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆದಿತ್ತು. ಇದರ ಲಾಭ ಪಡೆದ ಬಿಜೆಪಿ ಇದೇ ವಿಚಾರವನ್ನಿಟ್ಟುಕೊಂಡು ರಾಜ್ಯದಾದ್ಯಂತ ಹೋರಾಟಗಳನ್ನು ಮಾಡಿ ಹಿಂದೂಗಳ ಮತಬ್ಯಾಂಕ್ ಕ್ರೋಡೀಕರಿಸಿ, ಹಿಂದೂ ಕಾರ್ಯಕರ್ತರ ರಕ್ಷಣೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದಿತು.
ಆದರೆ ಇದೀಗ ಬಿಜೆಪಿ ಆಡಳಿತದಲ್ಲೂ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆಯ ಸರಮಾಲೆ ಮುಂದುವರೆದಿದೆ. ಕೆಲದಿನಗಳ ಹಿಂದಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬೆಳ್ಳಾರೆಯಲ್ಲಿ ಬಿಜೆಪಿ ಯುವನಾಯಕನನ್ನು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿತ್ತು.
ಬಿಜೆಪಿ ತನ್ನ ಕಾರ್ಯಕರ್ತರಿಗೆ ನೀಡಿದ್ದ ರಕ್ಷಣೆಯ ಭರವಸೆ ಸುಳ್ಳಾಗಿದ್ದು, ಕಾರ್ಯಕರ್ತರು ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇದನ್ನೇ ಸದುಪಯೋಗಪಡಿಸಿಕೊಂಡು ಬಿಜೆಪಿಗೆ ಟಕ್ಕರ್ ಕೊಡಲು ಹೊಸ ಹಿಂದೂ ಪಕ್ಷವೊಂದು ಅಸ್ತಿತ್ವಕ್ಕೆ ಬರಲು ಸಜ್ಜಾಗಿದೆ.
ಇದೇ ಆಗಸ್ಟ್ 7ರ ಆದಿತ್ಯವಾರದಂದು ವಿನಾಯಕ್ ಮಾಳದಕರ್ ಅಧ್ಯಕ್ಷತೆಯಲ್ಲಿ ಹಿಂದೂಸ್ತಾನ್ ಜನತಾ ಪಾರ್ಟಿ ಅಸ್ತಿತ್ವಕ್ಕೆ ಬರಲಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಶರಣ ಸೇವಾ ಸಮಾಜದಲ್ಲಿ ಮಠಾಧೀಶರೇ ಪಕ್ಷಕ್ಕೆ ಚಾಲನೆ ನೀಡಲಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಹಿಂದೂಸ್ತಾನ್ ಜನತಾ ಪಾರ್ಟಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಹೊಸ ಪಕ್ಷಕ್ಕೆ ಚಾಲನೆ ನೀಡುವ ಜೊತೆಗೆ ಮುಂದಿನ ಚುನಾವಣೆಗೆ ಪಕ್ಷದ ಪ್ರಣಾಳಿಕೆಯೂ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಪಕ್ಷದ ಪ್ರಾಣಾಳಿಕೆಯ ಪ್ರಮುಖ ಅಂಶಗಳು:
- ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂ ಭವನ ನಿರ್ಮಾಣ.
- 100ಯೂನಿಟ್ವರೆಗೆ ಉಚಿತ ವಿದ್ಯುತ್.
- ಮಹಿಳೆಯರಿಗೆ ಮಹಾನಗರ ಸಾರಿಗೆ ಉಚಿತ ಪ್ರಯಾಣ.
- ಎಲ್ಲಾ ವರ್ಗದ ಶಾಲೆ ಮಕ್ಕಳಿಗೆ ಉಚಿತ ಬಸ್ ಪಾಸ್.
- ಎಲ್ಲರಿಗೂ ವಿಶ್ವದರ್ಜೆಯ ಉಚಿತ ಶಿಕ್ಷಣ ಸೌಲಭ್ಯ.
- ಬೀದಿ ವ್ಯಾಪಾರಿಗಳಿಗೆ ಮನೆಕಟ್ಟಲು 5 ಲಕ್ಷ ಸಹಾಯಧನ
- ಸ್ಥಳೀಯ ಯುವಜನರಿಗೆ ಸರ್ಕಾರಿ, ಖಾಸಗಿ ಉದ್ಯೋಗ
- ಪ್ರತಿ ಜಿಲ್ಲೆಗಳಲ್ಲಿ ಐಟಿ-ಬಿಟಿ ಪ್ರಾರಂಭಕ್ಕೆ ಅವಕಾಶ
- ರಿಕ್ಷಾ ಚಾಲಕರು, ಗಾರ್ಮೆಂಟ್ ನೌಕರರಿಗೆ ಉಚಿತ ವಿಮೆ
- ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ
- ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಏಕರೂಪ ಶುಲ್ಕ
- ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾವೇರಿ ನೀರು ಸರಬರಾಜು.
- ಮಹದಾಯಿ ನೀರನ್ನ ಶೀಘ್ರ ಹರಿಸುವುದು
ಹೀಗೆ ಇತರ ಸೌಲಭ್ಯ ಜನರಿಗೆ ಒದಗಿಸಲು ಹಿಂದೂಸ್ತಾನ್ ಜನತಾ ಪಾರ್ಟಿ ಚಿಂತನೆ ನಡೆಸಿದೆ. ಒಂದು ವೇಳೆ ಪಕ್ಷಕ್ಕೆ ಜನ ಬೆಂಬಲ ಸಿಕ್ಕಿದ್ದೇ ಆದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದರಲ್ಲಿ ಸಂಶಯವಿಲ್ಲ.