ಹರಿಯಾಣದ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ನಡೆದ ಕಳ್ಳತನದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಾಲಕನೊಬ್ಬ ಬ್ಯಾಂಕ್ನಿಂದ ಬರೋಬ್ಬರಿ 20ಲಕ್ಷ ದೋಚಿ ಪರಾರಿಯಾಗಿದ್ದಾನೆ.
ಹನ್ನೊಂದು ವರ್ಷದ ಬಾಲಕನೊಬ್ಬ ಯಾರಿಗೂ ಗೊತ್ತಾಗದಂತೆ ಬ್ಯಾಂಕ್ನ ಕ್ಯಾಶ್ ಕೌಂಟರ್ ಒಳ ನುಗ್ಗಿ ಅಲ್ಲಿದ್ದ ಹಣದ ಕಟ್ಟುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎಸ್ಕೇಪ್ ಆಗಿದ್ದಾನೆ. ವ್ಯಕ್ತಿಯೊಂದಿಗೆ ಬ್ಯಾಂಕ್ ಶಾಖೆಗೆ ಆಗಮಿಸಿದ್ದ ಬಾಲಕ ಸ್ವಲ್ಪ ಹೊತ್ತು ಬೆಂಚಿನಲ್ಲಿ ಕೂತಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ವಲ್ಪ ಹೊತ್ತಿನ ಬಳಿಕ ಎದ್ದು ನಿಂತ ಬಾಲಕ, ಕ್ಯಾಶ್ ಕೌಂಟರ್ ಸಿಬ್ಬಂದಿ ಬಾಗಿಲು ಹಾಕದೆ ಹೊರಹೋಗಿರೋದನ್ನು ಗಮನಿಸಿ ಯಾರಿಗೂ ಅನುಮಾನ ಬಾರದ ರೀತಿ ಕ್ಯಾಶ್ ಕೌಂಟರ್ ಒಳಕ್ಕೆ ಹೋಗಿದ್ದಾನೆ. ಸ್ವಲ್ಪ ಸಮಯದ ಬಳಿಕ ಪ್ಲಾಸ್ಟಿಕ್ ಚೀಲದೊಂದಿಗೆ ಕ್ಯಾಶ್ ಕೌಂಟರ್ನಿಂದ ಹೊರಬಂದ ಬಾಲಕ ಪರಾರಿಯಾಗಿದ್ದಾನೆ.
ಕಳೆದ ಸೋಮವಾರ ಈ ಘಟನೆ ನಡೆದಿದ್ದು, ವಾರದ ಮೊದಲ ದಿನವಾದ್ದರಿಂದ ಬ್ಯಾಂಕ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿದ್ದರು. ಕೆಲಸದ ಒತ್ತಡದಿಂದ ಕ್ಯಾಷಿಯರ್ ಕ್ಯಾಬಿನ್ನಿಂದ ಹೊರಗೆ ಹೋಗುವಾಗ ಲಾಕ್ ಮಾಡುವುದು ಮರೆತಿದ್ದ.
ಘಟನೆ ನಡೆದು ಹಲವು ಸಮಯಗಳವರೆಗೂ ಬ್ಯಾಂಕ್ ಕಳ್ಳತನವಾಗಿರುವ ವಿಷಯ ಸಿಬ್ಬಂದಿಗೆ ತಿಳಿದಿರಲಿಲ್ಲ. ಕ್ಯಾಶಿಯರ್ ಮರಳಿ ಬಂದಾಗ ಕ್ಯಾಶ್ ಕೌಂಟರ್ನಿಂದ ಹಣ ದೋಚಿರೋದು ಗೊತ್ತಾಗಿದೆ. ಸಿಸಿಟಿವಿ ದೃಶ್ಯ ನೋಡಿದ ಬಳಿಕವಷ್ಟೇ ಬ್ಯಾಂಕ್ ಅಧಿಕಾರಿಗಳಿಗೆ ಗೊತ್ತಾಗಿದ್ದು.
ಬ್ಯಾಂಕ್ ಮ್ಯಾನೇಜರ್ ವಿಶ್ವಜಿತ್ ಸಿನ್ಹಾ ನೀಡಿರುವ ದೂರಿನ ಪ್ರಕಾರ, ಬಾಲಕ 5ಲಕ್ಷ ರೂಪಾಯಿಯ ನಾಲ್ಕು ಕಂತೆಗಳನ್ನು ಕದ್ದೊಯ್ದಿದ್ದಾನೆ. ಸಿಸಿಟಿವಿ ದೃಶ್ಯದ ಅಧಾರದಲ್ಲಿ ಆರೋಪಿಗಳನ್ನು ಮನೋವರ್ ಮತ್ತು ರವೀಂದರ್ ಎಂದು ಗುರುತಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ.