ಲಾರಿ-ಬಸ್ ಮಧ್ಯೆ ಸಿಕ್ಕು ದ್ವಿಚಕ್ರ ವಾಹನ ಸವಾರ ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ಎಂಬಲ್ಲಿ ನಡೆದಿದೆ. ಮೃತ ದ್ವಿಚಕ್ರ ಚಾಲಕನನ್ನು ಜೋಕಟ್ಟೆ ನಿವಾಸಿ ಸುಧಾಕರ್(28) ಎಂದು ಗುರುತಿಸಲಾಗಿದೆ.
ಸುರತ್ಕಲ್-ಕಾನ ರಸ್ತೆಯ ಮಿಸ್ಕಿತ್ ಆಸ್ಪತ್ರೆಯ ಮುಂಭಾಗದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಖಾಸಗಿ ಬಸ್ ಒಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಲುವಾಗಿ ನಿಲ್ಲಿಸಿದ್ದು, ಈ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರ ಕೂಡ ತಮ್ಮ ಗಾಡಿಯನ್ನು ಬಸ್ ಹಿಂಬದಿ ನಿಲ್ಲಿಸಿದ್ದಾರೆ.
ಇದೇ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಬಂದ ಲಾರಿ ದ್ವಿಚಕ್ರ ವಾಹನಕ್ಕೆ ಗುದ್ದಿ ಬಸ್ಗೆ ಅಪ್ಪಳಿಸಿದೆ. ಲಾರಿ ಹಾಗೂ ಬಸ್ ಮಧ್ಯೆ ಸಿಕ್ಕಿಹಾಕಿಕೊಂಡ ಬೈಕ್ ಸವಾರ ಅಪ್ಪಚ್ಚಿಯಾಗಿ ಹೋಗಿದ್ದಾರೆ. ತೀವ್ರವಾಗಿ ಗಾಯಗೊಂಡ ಬೈಕ್ ಸವಾರ ಅತೀವ ರಕ್ತಸ್ತ್ರಾವದಿಂದಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಘಟನೆಯಲ್ಲಿ ದ್ವಿಚಕ್ರ ವಾಹನ ಕೂಡ ನಜ್ಜುಗುಜ್ಜಾಗಿದ್ದು, ಬಸ್ನ ಹಿಂಭಾಗಕ್ಕೆ ಕೂಡ ಹಾನಿಯಾಗಿದೆ. ಭೀಕರ ಅಪಘಾತದ ದೃಶ್ಯಾವಳಿಗಳು ಮಿಸ್ಕಿತ್ ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಪಘಾತಕ್ಕೆ ಲಾರಿ ಚಾಲಕನ ಅಜಾಗರೂಕತೆಯೇ ಕಾರಣ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Watch Video
