fbpx

ಮರದ ತುಂಡು ಎಂದು ಹತ್ತಿರ ಹೋದ ಮೀನುಗಾರರಿಗೆ ಸಮುದ್ರದಲ್ಲಿ ಸಿಕ್ಕಿದ್ದೇನು ನೋಡಿ, ವೈರಲ್ ವಿಡಿಯೋ

ಸುಮಾರು ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಜೀವಂತವಾಗಿ ಸಮುದ್ರದಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಕೊಲಂಬಿಯಾ ಕರಾವಳಿ ಪ್ರದೇಶದಲ್ಲಿ 46ವರ್ಷದ ಏಂಜಲಿಕಾ ಗೈಟನ್ ಎಂಬ ಮಹಿಳೆ ಪತ್ತೆಯಾಗಿದ್ದು ಎಲ್ಲರನ್ನೂ ಚಕಿತಗೊಳಿಸಿದೆ.

ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಸಮುದ್ರದಲ್ಲಿ ತೇಲುತ್ತಿರುವ ವಸ್ತುವೊಂದು ಪತ್ತೆಯಾಗಿದ್ದು, ಹತ್ತಿರ ಹೋಗಿ ನೋಡಿದಾಗ ಅದು ಮಹಿಳೆಯ ದೇಹವಾಗಿತ್ತು. ಕೂಡಲೇ ಮೀನುಗಾರರು ಏಂಜಲಿಕಾರ ರಕ್ಷಣೆ ಮಾಡಿದ್ದಾರೆ.

ಮೀನುಗಾರ ರೊಲ್ಯಾಂಡೋ ವಿಸ್ಬಲ್ ಮತ್ತವರ ಸ್ನೇಹಿತರು ಮಹಿಳೆಯನ್ನು ಪೋರ್ಟೊ ಕೊಲಂಬಿಯಾದ ಸಮುದ್ರ ದಡದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಪತ್ತೆಹಚ್ಚಿದ್ದಾರೆ. ಮಹಿಳೆಯನ್ನು ರಕ್ಷಣೆ ಮಾಡುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ವಿಸ್ಬಲ್ ಅವರು ತಮ್ಮ ಸಾಮಾಜಿಕ‌ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಮಹಿಳೆಯನ್ನು ನೋಡಿ ಯಾವುದೇ ಮರದ ತುಂಡು ಇರಬಹುದೇನೆಂದು ವಿಸ್ಬಲ್ ಮತ್ತು ಸ್ನೇಹಿತರು ಭಾವಿಸಿದ್ದರಂತೆ. ಆದರೆ, ಏಂಜೆಲಿಕಾ ಅವರು ಸಹಾಯಕ್ಕಾಗಿ ಕೈಮೇಲೆ ಎತ್ತಿ ಸೂಚನೆ ನೀಡಿದಾಗಲೇ ವಿಸ್ಬಲ್ ಅವರಿಗೆ ಘಟನೆ ಅರಿವಾಗಿದೆ.

ಕೂಡಲೇ ದೋಣಿಯನ್ನು ಮಹಿಳೆಯೆಡೆಗೆ ತಿರುಗಿಸಿ ನಿತ್ರಾಣ ಸ್ಥಿತಿಯಲ್ಲಿದ್ದ ಏಂಜೆಲಿಕಾರನ್ನು ರಕ್ಷಿಸಿದ್ದಾರೆ. ಹಲವು ಸಮಯಗಳಿಂದ ನೀರಿನಲ್ಲಿ ತೇಲಿದ್ದರಿಂದ ಏಂಜೆಲಿಕಾ ಅವರು ತುಂಬಾ ದಣಿದಿದ್ದರು ಮತ್ತು ಲಘು ಉಷ್ಣತೆಯಿಂದ ಬಳಲಿದ್ದರು.

ಇನ್ನು ನಿತ್ರಾಣರಾಗಿದ್ದ ಏಂಜೆಲಿಕಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಕೌಟುಂಬಿಕ ಕಲಹದಿಂದ ನೊಂದು ಅವರು ಮನೆಯನ್ನು ಎರಡು ವರ್ಷಗಳ ಹಿಂದೆ ತ್ಯಜಿಸಿದ್ದರು. ಇದೀಗ ಸಮುದ್ರದಲ್ಲಿ ಪತ್ತೆಯಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

Watch Video

error: Content is protected !!