ಮೊಬೈಲ್ ಕದಿಯಲು ಯತ್ನಿಸಿದ ಕಳ್ಳನನ್ನು ಬಾಲಕಿಯೊಬ್ಬಳು ಸಾಹಸ ಪ್ರದರ್ಶಿಸಿ ಹಿಡಿದ ಘಟನೆ ಪಂಜಾಬ್ನ ಜಲಂದರ್ನಲ್ಲಿ ನಡೆದಿದೆ. ಬೈಕ್ನಲ್ಲಿ ಬಂದ ಕಳ್ಳರು ಬಾಲಕಿಯನ್ನು ಹಿಂಬಾಲಿಸಿ ಮೊಬೈಲ್ ಕೈಯಿಂದ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.
ಆದರೆ ಬಾಲಕಿ ಓರ್ವ ಖದೀಮನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಕಳ್ಳ ತನ್ನ ಕೈಯಲ್ಲಿದ್ದ ಆಯುಧದಿಂದ ಅಕೆಯ ಮೇಲೆ ದಾಳಿ ಮಾಡಿದ್ರೂ ಬಾಲಕಿ ಜಗ್ಗದೆ ಆತನನ್ನು ಪರಾರಿಯಾಗಲು ಬಿಡಲಿಲ್ಲ. ಬಾಲಕಿಯ ಕಿರುಚಾಟ ಕೇಳಿ ಅಲ್ಲೇ ಹತ್ತಿರದಲ್ಲಿದ್ದ ಜನರು ಓಡಿಬಂದಿದ್ದು, ಬೈಕ್ ಓಡಿಸುತ್ತಿದ್ದ ಕಳ್ಳ ತಪ್ಪಿಸಿಕೊಂಡರೆ, ಹಿಂಬದಿ ಕೂತಿದ್ದಾತ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈ ಎಲ್ಲಾ ಘಟನೆಯ ವಿಡಿಯೋ ಅಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳ್ಳನೊಂದಿಗೆ ಕಾದಾಡಿದ ಬಾಲಕಿಯನ್ನು ಫತೇಹ್ಪುರಿ ಮೊಹಲ್ಲಾ ನಿವಾಸಿ 15ರ ಹರೆಯದ ಕುಸುಮ ಕುಮಾರಿ ಎಂದು ಗುರುತಿಸಲಾಗಿದೆ.
ಹೊರಗೆ ಹೋಗಿದ್ದ ಬಾಲಕಿ ಮನೆ ಕಡೆ ಮರಳುವಾಗ ಈ ಘಟನೆ ನಡೆದಿದ್ದು, ಹಿಂದಿನಿಂದ ಬೈಕ್ನಲ್ಲಿ ಬಂದ ಖದೀಮರು ಬಾಲಕಿಯ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಬಾಲಕಿ ಪ್ರತಿರೋಧ ತೋರಿದಾಗ ಹರಿತವಾದ ಆಯುಧದಿಂದ ಆಕೆಯ ಮೇಲೆ ಪ್ರಹಾರ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಕಳ್ಳ ಎಷ್ಟೇ ದಾಳಿ ಮಾಡಿದ್ರೂ ಬಾಲಕಿ ಮಾತ್ರ ಆತನನ್ನು ತಪ್ಪಿಸಿಕೊಳ್ಳಲು ಬಿಟ್ಟಿಲ್ಲ. ಬಾಲಕಿಯ ಕೂಗಾಟ ಕೇಳಿ ನೆರೆಹೊರೆಯವರು ಓಡಿಬಂದು ಒಬ್ಬಾತನನ್ನು ಹಿಡಿದುಕೊಂಡರೆ, ಇನ್ನೊಬ್ಬಾತ ಬೈಕ್ ಏರಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಬಾಲಕಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಲಕಿ ಸೆರೆಹಿಡಿದ ಕಳ್ಳನನ್ನು ಅವಿನಾಶ್ ಕುಮಾರ್(22) ಎಂದು ಗುರುತಿಸಲಾಗಿದ್ದು, ಈತ ಬಸ್ತಿ ಡ್ಯಾನಿಶ್ಮಂಡದ ಬೇಗುಂಪುರದ ನಿವಾಸಿ. ಇನ್ನು ಬಂಧಿತನಿಂದ ಪರಾರಿಯಾಗಿರುವ ಕಳ್ಳನ ಮಾಹಿತಿ ಪಡೆದಿರುವ ಪೋಲೀಸರು ಆತನ ಪತ್ತಗೆ ಬಲೆ ಬೀಸಿದ್ದಾರೆ. ಬಾಲಕಿ ಕಳ್ಳನನ್ನು ಸೆರೆಹಿಡಿದ ವಿಡಿಯೋ ಇಲ್ಲಿದೆ ನೋಡಿ,
Watch Video
