ಕೇರಳದ ಕಾಂಗ್ರೆಸ್ ಶಾಸಕಿ ಶನಿಮೋಲ್ ಉಸ್ಮಾನ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸುವ ಸಲುವಾಗಿ ಶಾಸಕಿ ತನ್ನ ಫೇಸ್ಬುಕ್ ಖಾತೆಯಲ್ಲಿ ಕಾಶ್ಮೀರವಿಲ್ಲದ ಭಾರತದ ನಕ್ಷೆಯನ್ನು ಹಂಚಿಕೊಳ್ಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಟೋ ವೈರಲ್ ಆಗುತ್ತಿದ್ದಂತೆ ಶಾಸಕಿಯ ವಿರುದ್ಧ ಹಿಂದೂ ಸಂಘಟನೆಗಳು ಕೇರಳದ ಆರೂರು ಮತ್ತು ಚೆರ್ತಲಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು, ‘ಕಾಂಗ್ರೆಸ್ ಮೊದಲಿನಿಂದಲೂ ದೇಶದ್ರೋಹಿಯಾಗಿ ವರ್ತಿಸುತ್ತಿದೆ, ಇದೀಗ ಕಾಂಗ್ರೆಸ್ ಶಾಸಕಿ ಕಾಶ್ಮೀರವಿಲ್ಲದ ಭಾರತದ ನಕ್ಷೆ ಪ್ರಕಟಿಸಿಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ನ ದೇಶದ್ರೋಹಿ ಮುಖವಾಡ ಬಯಲು ಮಾಡಿದ್ದಾರೆ’ ಎಂದು ಹೇಳಿದ್ದಾರೆ.
ಪೋಸ್ಟ್ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಶಾಸಕಿ ತನ್ನ ಫೇಸ್ಬುಕ್ ಖಾತೆಯಿಂದ ಅದನ್ನು ತೆಗೆದು ಹಾಕಿದ್ದಾರೆ. ಘಟನೆಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕಿ ಶನಿಮೋಲ್ ಉಸ್ಮಾನ್, ‘ಫೇಸ್ಬುಕ್ ಖಾತೆ ನಿರ್ವಾಹಕರ ಅಚಾತುರ್ಯದಿಂದಾಗಿ ಈ ಘಟನೆ ನಡೆದಿದ್ದು, ತಪ್ಪಿನ ಅರಿವಾದ ಕೂಡಲೆ ತೆಗೆದುಹಾಕಿದ್ದೇವೆ’ ಎಂದು ಸಬೂಬು ನೀಡಿದ್ದಾರೆ.
ಆದರೆ ಶಾಸಕಿ ಕೊಟ್ಟಿರುವ ಸಬೂಬು ಕೇಳಲು ದೇಶಪ್ರೇಮಿಗಳು ತಯಾರಿಲ್ಲ. ಈಕೆ ಬೇಕೆಂದೇ ಕಾಶ್ಮೀರ-ಲಡಾಖ್ ಇಲ್ಲದ ನಕ್ಷೆ ಹಂಚಿಕೊಂಡಿದ್ದಾಳೆ. ಅನಕ್ಷರಸ್ಥರಿಗೂ ಈ ನಕ್ಷೆ ನೋಡಿದಾಗ ಏನೋ ತಪ್ಪಿದೆ ಎಂದು ಅರಿವಾಗುತ್ತೆ, ಆದರೆ ಎಲ್ಎಲ್ಬಿ ಡಿಗ್ರಿ ಓದಿರುವ ಶಾಸಕಿಗೆ ಇದರ ಬಗ್ಗೆ ಗೊತ್ತಾಗಿಲ್ವ ಎಂದು ಪ್ರಶ್ನಿಸಿದ್ದಾರೆ.