fbpx

ಕನಸಿನ ಮನೆಯ ಗೃಹಪ್ರವೇಶದಲ್ಲಿ ಮೃತ ಮಡದಿಯನ್ನೇ ಪ್ರತ್ಯಕ್ಷವಾಗಿಸಿದ ಉದ್ಯಮಿ! ಇದರ ಹಿಂದಿದೆ ಕಲಾವಿದರ ಕೈಚಳಕ (ವೈರಲ್ ವಿಡಿಯೋ)

ಅದು ತನ್ನ ಪತ್ನಿಯ ಕನಸಿನ ಮನೆ. ಆದ್ರೆ ಹೊಸ ಮನೆಯ ಗೃಹಪ್ರವೇಶದ ಸಂಭ್ರಮದ ದಿನ ಆಕೆ ಇಲ್ಲವಲ್ಲ ಎಂಬ ಕೊರಗು ಅವರನ್ನ ಕಾಡುತ್ತಿತ್ತು. ಆದ್ರೂ ಗೃಹಪ್ರವೇಶದಲ್ಲಿ ಆಕೆಯ ಅನುಪಸ್ಥಿತಿ ಎದ್ದು ಕಾಣಬಾರದು ಎಂದು ವ್ಯಕ್ತಿಯೊಬ್ಬರು ಪ್ರತಿಮೆ ಮೂಲಕ ಪತ್ನಿಯನ್ನ ಜೀವಂತವಾಗಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಕೊಪ್ಪಳದ ಉದ್ಯಮಿ ಶ್ರೀನಿವಾಸ್ ಗುಪ್ತಾ ಅವರ ಧರ್ಮ ಪತ್ನಿ ವೆಂಕಟ ನಾಗ ಮಾಧವಿ ಅವರು ಮೃತರಾಗಿದ್ದರು. ಹೇಗಾದರೂ ಮಾಡಿ ತನ್ನ ಮಡದಿ ಗೃಹಪ್ರವೇಶದಲ್ಲಿ ತಮ್ಮ ಜೊತೆ ಇರಬೇಕು ಎಂದು ಯೋಚಿಸಿದ ಉದ್ಯಮಿ, ಕಲಾವಿದರೊಬ್ಬರ ಸಹಾಯದಿಂದ ಪತ್ನಿಯನ್ನೇ ಹೋಲುವ ಪ್ರತಿಮೆ ಮಾಡಿಸಿದ್ದಾರೆ.

ಬೆಂಗಳೂರಿನ ಗೊಂಬೆಮನೆ ಕಲಾವಿದರು ರಬ್ಬರ್, ಸಿಲಿಕಾನ್ ವಸ್ತುಗಳನ್ನು ಬಳಸಿ ನೈಜ ರೂಪದ ಪ್ರತಿಮೆಯನ್ನೇ ತಯಾರಿಸಿ ಕೊಟ್ಟಿದ್ದಾರೆ. ಕೊನೆಗೂ ಉದ್ಯಮಿಯ ಆಸೆ ನಿರಾಸೆಯಾಗಲಿಲ್ಲ, ಅವರ ಮೃತ ಪತ್ನಿ ಗೃಹಪ್ರವೇಶದಲ್ಲಿ ಕಾಣಿಸಿಕೊಂಡಿದ್ದರು. ಗೃಹಪ್ರವೇಶಕ್ಕೆ ಬಂದ ಅತಿಥಿಗಳನ್ನು ಸ್ವಾಗತಿಸಲು ಮನೆಯ ಮುಂಭಾಗದಲ್ಲೇ ಇರಿಸಲಾಗಿದ್ದ ಸೋಫ ಮೇಲೆ ಕೂತಿದ್ದರು.

ಇದನ್ನು ಗಮನಿಸಿದ ನೆಂಟರಿಷ್ಟರು ಒಮ್ಮೆ ಶಾಕ್‌ಗೆ ಒಳಗಾಗಿದ್ದಾರೆ. ಆದರೆ ಅದು ಪ್ರತಿಮೆ ಎಂದು ಗೊತ್ತಾದ ನಂತರ ಸಾಕಷ್ಟು ಪೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಎರಡು ದಿನಗಳ ಕಾಲ ಅದ್ಧೂರಿಯಾಗಿ ಗೃಹಪ್ರವೇಶ ನೆರವೇರಿದೆ. ಇದೀಗ ಗೃಹಪ್ರವೇಶದ ವಿಡಿಯೋ ಹಾಗೂ ಪ್ರತಿಮೆಯ ಪೋಟೋಗಳು ಸಾಕಷ್ಟು ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!