ತನ್ನ ದಾರಿಗೆ ಅಡ್ಡ ಬಂದ ರೈಲ್ವೇ ಬ್ಯಾರಿಕೇಡ್ಗಳನ್ನು ಆನೆಯೊಂದು ತನ್ನ ಸೊಂಡಿಲಿನಿಂದ ಕಿತ್ತೊಗೆದ ಘಟನೆ ಚಾಮರಾಜನಗರ ಜಿಲ್ಲೆಯ ಬೇಗೂರಿನ ಕಾಟವಾಳು ಗ್ರಾಮದಲ್ಲಿ ನಡೆದಿದೆ. ಕೋಪದಿಂದ ರೈಲ್ವೇ ಬ್ಯಾರಿಕೇಡ್ಗೆ ಗುದ್ದಿದ ಆನೆ ತನ್ನ ದಂತಗಳನ್ನು ಬಳಸಿ ಕಬ್ಬಿಣದ ಕಂಬಗಳನ್ನು ಎತ್ತಿ ದೂಡಿಹಾಕಿದೆ.
ಘಟನೆ ನಡೆದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯು ರೈಲು ಕಂಬಿ ಅಳವಡಿಸುವ ಕಾಮಗಾರಿ ನಡೆಸುತ್ತಿದ್ದು, ಇದೇ ದಾರಿಯಾಗಿ ಬಂದ ಒಂಟಿ ಸಲಗವು ತನ್ನ ದಾರಿಗೆ ಅಡ್ಡವಾದ ಕಂಬಿಯನ್ನು ಆಕ್ರೋಶದಿಂದ ಗುದ್ದಿದೆ. ಇದರಿಂದ ಕಾಂಕ್ರೀಟ್ ಹಾಕಿ ಅಳವಡಿಸಿದ್ದ ಕಂಬಗಳು ನೆಲಕ್ಕುರುಳಿ ಬಿದ್ದಿದೆ.
ಆನೆಯ ಆರ್ಭಟಕ್ಕೆ ಅರಣ್ಯ ಸಿಬ್ಬಂದಿಯೇ ಬೆಚ್ಚಿಬಿದ್ದಿರುವುದು ದೃಶ್ಯದಲ್ಲಿ ಕಂಡುಬಿದ್ದಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ಎನ್.ಬೇಗೂರು ವಲಯದ ಆರ್ಎಫ್ಒ ಚೇತನ್, ‘ಸ್ಥಳದಲ್ಲಿ ರೈಲು ಕಂಬಿ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಕಾಂಕ್ರೀಟ್ ಕಂಬಗಳು ಇನ್ನೂ ಗಟ್ಟಿಯಾಗುವ ಮೊದಲೇ ಆನೆ ಬ್ಯಾರಿಕೇಡ್ಗೆ ಗುದ್ದಿದ ಪರಿಣಾಮ ಅದು ನೆಲಕ್ಕುರುಳಿವೆ. ಘಟನೆಯಿಂದ ಯಾವುದೇ ಅನಾಹುತವಾಗಿಲ್ಲ’ ಎಂದು ತಿಳಿಸಿದ್ದಾರೆ. ವೈರಲ್ ವೀಡಿಯೋ ನೋಡಿ