ತಡವಾಗಿ ಊಟ ಬಡಿಸಿದಳೆಂಬ ಕಾರಣಕ್ಕೆ ತಾಯಿಯನ್ನೇ ಪುತ್ರನೊಬ್ಬ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಬಾವಾನಾ ಕೈಗಾರಿಕಾ ಪ್ರದೇಶದ ನಿವಾಸಿ 60ವರ್ಷ ವಯಸ್ಸಿನ ವೃದ್ಧೆ ಬಾಲಾದೇವಿ ಮಗನಿಂದನೇ ಹತಳಾದ ದುರ್ದೈವಿ. ಆಕೆಯ ಮಗ ಸೂರಜ್ ಹತ್ಯೆ ಮಾಡಿದವನು.
ಶುಕ್ರವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದಿದ್ದ ಸೂರಜ್ ತಾಯಿಯಲ್ಲಿ ಊಟ ಬಡಿಸುವಂತೆ ಹೇಳಿದ್ದು, ತಾಯಿ ಇನ್ನೂ ಅಡುಗೆ ಮಾಡುತ್ತಿದ್ದರಿಂದ ಸ್ವಲ್ಪ ಕಾಯುವಂತೆ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಸೂರಜ್ ತಾಯಿಯೆಂದೂ ನೋಡದೆ ಬಾಲಾದೇವಿ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ.

ತನ್ನ ಪರಿಚಯಸ್ಥರ ಬಳಿ ಪಿಸ್ತೂಲ್ ಖರೀದಿಸಿ ಅಕ್ರಮವಾಗಿ ಇರಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಗುಂಡು ಹಾರಿಸಿದ ಶಬ್ದ ಕೇಳಿ ನೆರೆಹೊರೆಯವರು ತಕ್ಷಣಾ ಬಾಲಾದೇವಿ ರಕ್ಷಣೆಗೆ ದಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೆ ವೃದ್ದೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಪ್ರಾಣ ಬಿಟ್ಟಿದ್ದಳು.
ಗುಂಡು ಹಾರಿಸಿದ್ದು ಸೂರಜ್ ಎಂದು ಗೊತ್ತಾಗುತ್ತಲೇ ಆತನನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆತನನ್ನು ಬಂಧಿಸಲಾಗಿದ್ದು, ಆತನ ಬಳಿ ಇದ್ದ ಅಕ್ರಮ ಪಿಸ್ತೂಲ್ ಅನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.