fbpx

ಲಾಕ್-ಡೌನ್ ಮಧ್ಯೆಯೇ ತಾಯಿಯನ್ನು ನೋಡುವ ಆತುರದಿಂದ 1600ಕಿ.ಮೀ ನಡೆದುಕೊಂಡು ಬಂದರೂ, ಮನೆಯೊಳಕ್ಕೆ ಬಿಟ್ಟುಕೊಳ್ಳದ ತಾಯಿ

ಮಗನೊಬ್ಬ ತನ್ನ ತಾಯಿಯನ್ನು ಕಾಣುವ ಸಲುವಾಗಿ ಲಾಕ್ ಡೌನ್ ಆತಂಕದ ನಡುವೆ ಕೂಡ ದೂರದ ಮುಂಬೈನಿಂದ ವಾರಣಾಸಿಗೆ ಬರೋಬ್ಬರಿ 1600 ಕಿ.ಮೀ ದೂರ ಕ್ರಮಿಸಿ ಬಂದರೂ ಆತನಿಗೆ ನಿರಾಶೆ ಕಾದಿತ್ತು. ದೂರದಿಂದ ಬಂದ ಮಗನನ್ನು ತಾಯಿ ಪ್ರೀತಿಯಿಂದ ಅಪ್ಪಿ ಬರಮಾಡಿಕೊಳ್ಳುವ ಬದಲು ಕೋರೋನಾ ಭಯದಿಂದ ಆಕೆ ಅವನನ್ನು ಮನೆಯೊಳಗೆ ಸೇರಿಸಿಕೊಳ್ಳಲೂ ಸಹ ನಿರಾಕರಿಸಿದ್ದಾಳೆ.

ವಾರಣಾಸಿ ಮೂಲದ ಅಶೋಕ್ (25) ಎಂಬಾತ ಮುಂಬೈನ ಹೋಟೇಲ್ ಒಂದರಲ್ಲಿ ಸಪ್ಲೈಯರ್ ಆಗಿ ಕೆಲಸದಲ್ಲಿದ್ದ. ಇದೀಗ ದೇಶಾದ್ಯಂತ ಲಾಕ್ ಡೌನ್ ಆಗಿರುವ ಹಿನ್ನೆಲೆ ಕೆಲಸವಿಲ್ಲದೆ ಹೋಗಿ ತಾನು ಊರಿಗೆ ಹಿಂತಿರುಗಿ ತನ್ನ ತಾಯಿ ಹಾಗೂ ಸಹೋದರನೊಡನೆ ಇರಲು ಬಯಸಿದ್ದ. ಅದಕ್ಕಾಗಿ ಆತ ಮುಬೈಯಿಂದ ಕಾಲ್ನಡಿಗೆಯಲ್ಲೇ ಸಾವಿರಾರು ಕಿಮೀ ದೂರ ಕ್ರಮಿಸಿ ಊರಿಗೆ ಬಂದಿದ್ದ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಊರಿಗೆ ಬಂದ ಬಳಿಕ ಅಶೋಕ್ ತನಗೆ ಕೊರೋನಾ ಸೋಂಕು ತಗುಲಿದೆಯೇ ಎಂದು ಪರೀಕ್ಷೆಗೆ ಒಳಪಡಲು ಕಬೀರ್‌ಚೌರಾದ ವಿಭಾಗೀಯ ಆಸ್ಪತ್ರೆಗೆ ಹೋಗಿದ್ದಾನೆ. ಅಲ್ಲಿ ಯಾವುದೇ ಸ್ಕ್ರೀನಿಂಗ್ ಮಾಡದ ಕಾರಣ, ಅಲ್ಲಿನ ವೈದ್ಯರು ಅಶೋಕ್ ನನ್ನು ದೀನ್ ದಯಾಳ್ ಲೆವೆಲ್ 2 ಆಸ್ಪತ್ರೆಗೆ ಕಳಿಸಿದ್ದರು. ಆಸ್ಪತ್ರೆಯಲ್ಲಿ ಅವನ ತಪಾಸಣೆಯ ನಂತರ ಅವನಲ್ಲಿ ಸೋಂಕಿನ ಯಾವುದೇ ಚಿಹ್ನೆಗಳು ಇಲ್ಲದಿದ್ದರೂ, 14 ದಿನಗಳ ಕಾಲ ಸೆಲ್ಫ್-ಕ್ವಾರಂಟೈನ್ ಮಾಡಲು ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆಯನ್ನು ಅನುಸರಿಸಲು ನಿರ್ಧರಿಸಿದ ಬಳಿಕವೇ ಅಶೋಕ್ ತನ್ನ ಮನೆಗೆ ತೆರಳಿದ್ದ.

ಆದರೆ ಅವನ ತಾಯಿ ಮತ್ತು ಸಹೋದರ ಅಶೋಕ್ ನಿಂದ ಕೊರೋನಾ ಬರಬಹುದು ಎಂದು ಶಂಕಿಸಿ ಬಾಗಿಲು ತೆರೆಯಲು ನಿರಾಕರಿಸಿದ್ದಾರೆ. ಅಶೋಕ್ ತನ್ನ ಕುಟುಂಬವನ್ನು ಮನವೊಲಿಸಲು ತನ್ನ ಕೈಲಾದ ಎಲ್ಲಾ ಪ್ರಯತ್ನ ಮಾಡಿದ್ದು ಯಾವುದೇ ಪ್ರಯೋಜನವಾಗಲಿಲ್ಲ.

ತಾಯಿಯನ್ನು ಮನವೊಲಿಸಲು ವಿಫಲನಾದ ಅಶೋಕ್ ಕಡೆಗೆ ತನ್ನ ತಾಯಿಯ ಅಜ್ಜಿಯ ಮನೆಯಿದ್ದ ಕಟುಪುರ ಗ್ರಾಮಕ್ಕೆ ತೆರಳಿದ್ದ. ಆದರೆ ಅಲ್ಲಿಯೂ ಕೊರೋನಾ ಭಯದಿಂದ ಅವನಿಗೆ ಆಶ್ರಯ ದೊರಕಲಿಲ್ಲ. ಅವರೂ ಅಶೋಕ್ ಕೊರೋನಾವೈರಸ್ ದಾಳಿಗೆ ತುತ್ತಾಗಿರಬಹುದು ಎಂದು ಶಂಕಿಸಿದ್ದಾರೆ. ಅಶೋಕ್ ನನ್ನು ಮನೆಗೆ ಸೇರಿಸಿಕೊಂಡರೆ ಪೊಲೀಸರು ಹಾಗೂ ಆರೋಗ್ಯ ಅಧಿಕಾರಿಗಳು ನಮಗೆ ತೊಂದರೆ ಕೊಡಬಹುದೆಂದು ಭಾವಿಸಿ ಅಲ್ಲಿದ್ದವರೂ ಆತನನ್ನು ಮನೆಯೊಳಕ್ಕೆ ಬಿಟ್ಟುಕೊಳ್ಳಲು ಸಿದ್ದರಿರಲಿಲ್ಲ.

ಕೊನೆಗೆ ಅಶೋಕ್ ಗೆ ಉಳಿದುಕೊಳ್ಳಲು ಎಲ್ಲಿಯೂ ಜಾಗ ದೊರಕದ ಕಾರಣ ಜಿಲ್ಲಾ ಪೊಲೀಸರು ಆತನನ್ನು ವಾರಣಾಸಿಯ ಮೈದಾಗಿನ್ ಪ್ರದೇಶದ ಖಾಸಗಿ ಆಸ್ಪತ್ರೆಯ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಕೊಟ್ವಾಲಿ ಪೊಲೀಸ್ ಠಾಣೆ ಅಧಿಕಾರಿ ಇನ್ಸ್‌ಪೆಕ್ಟರ್ ಮಹೇಶ್ ಪಾಂಡೆ “ಆತ ಉತ್ತಮ ಆರೋಗ್ಯ ಹೊಂದಿದ್ದಾನೆ. ಆದರೆ ಸಾವಿರ ಕಿಲೋಮೀಟರ್ ನಡೆದು ಬಂದ ಕಾರಣ ತುಂಬಾ ದಣಿದಿದ್ದಾನೆ” ಎಂದು ಹೇಳಿದರು.

error: Content is protected !!