ಪುಟ್ಟ ಮಕ್ಕಳ ಮೇಲೆ ಎಷ್ಟೇ ಗಮನವಿಟ್ಟರು ಸಾಲದು. ಕೆಲವೊಮ್ಮೆ ಅವರು ಮಾಡುವ ಕೀಟಲೆಗಳು ಅವರ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಸುದ್ದಿ. ತನಗೆ ಕಚ್ಚಿದ ಹಾವನ್ನು ಪುಟ್ಟ ಮಗುವೊಂದು ಕಚ್ಚಿಕಚ್ಚಿ ಕೊಂದು ಹಾಕಿದ ಘಟನೆ ವರದಿಯಾಗಿದೆ.
ಘಟನೆ ನಡೆದಿರೋದು ಟರ್ಕಿಯ ಬ್ಯಾಂಗೋಲ್ ನಗರದ ಕಾಂತಾರ್ ಎಂಬ ಪುಟ್ಟ ಗ್ರಾಮದಲ್ಲಿ. 2 ವರ್ಷದ ಪುಟ್ಟ ಮಗುವೊಂದು ಮನೆಯ ಒಳಗೆ ಆಟವಾಡುತ್ತಿದ್ದಾಗ ಹಾವೊಂದು ಮನೆಯೊಳಗೆ ಪ್ರವೇಶಿಸಿದೆ. ಪುಟ್ಟ ಮಗು ಹಾವನ್ನು ಆಟಿಕೆ ಎಂದು ಭಾವಿಸಿ ಕೈಯಲ್ಲಿ ಹಿಡಿಯಲು ಹೋಗಿದೆ, ಆದರೆ ಹಾವು ಏಕಾಏಕಿ ಮಗುವಿನ ತುಟಿಗೆ ಕಚ್ಚಿ ಹಿಡಿದುಕೊಂಡಿದೆ.
ನೋವಿನಿಂದ ಮಗು ಕೂಗಿಕೊಂಡಾಗ ಮನೆಮಂದಿ ಮಗುವಿನ ಬಳಿ ಓಡಿ ಬಂದಿದ್ದಾರೆ. ನೋಡಿದ್ರೆ ಸುಮಾರು 2 ಅಡಿ ಉದ್ದದ ಹಾವನ್ನು ಮಗು ತನ್ನ ಹಲ್ಲುಗಳಿಂದ ಕಚ್ಚಿ ಹಿಡಿದುಕೊಂಡಿತ್ತು. ಹಾವು ಕೂಡ ಮಗುವಿನ ಕೆಳ ತುಟಿಗೆ ಕಚ್ಚಿತ್ತು, ಮಗು ನೋವಿನಿಂದ ಅಳುತ್ತಿತ್ತು.
ತಕ್ಷಣ ಮಗುವನ್ನು ಟರ್ಕಿಯ ಬಿಂಗೋಲ್ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅಲ್ಲಿ ಆಕೆಯನ್ನು 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಮಗು ಸದ್ಯ ಪ್ರಾಣಾಪಾಯದಿಂದ ಪಾರಾಗಿದೆ ಆದರೆ ಮಗುವಿನಿಂದ ಕಚ್ಚಿಸಿಕೊಂಡ ಹಾವು ಮಾತ್ರ ಸ್ಥಳದಲ್ಲೇ ಪ್ರಾಣಬಿಟ್ಟಿದೆ.
Animals Reunited With Owners AFTER YEARS!
