ಸೋಶಿಯಲ್ ಮಿಡಿಯಾ ಮೇಲ್ನೋಟಕ್ಕೆ ಎಷ್ಟು ಒಳ್ಳೆಯದು ಅನ್ಸುತ್ತೋ ಅಷ್ಟೇ ಅಪಾಯಕಾರಿ ಕೂಡ. ಸಾಮಾಜಿಕ ಜಾಲತಾಣಗಳ ಮೂಲಕ ಮೋಸ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಮೋಸಗಾರರು ದಿನಕ್ಕೊಂದು ರೀತಿಯಲ್ಲಿ ಹೊಸಹೊಸ ಉಪಾಯಗಳ ಮೂಲಕ ಅಮಾಯಕರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದೀಗ ಇದೇ ಸೋಶಿಯಲ್ ಮಿಡಿಯಾ ಮೂಲಕ ಹೊಸದೊಂದು ರೀತಿಯ ಅಪಾಯ ಎದುರಾಗಿದೆ.
ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಖಾತೆ ಹೊಂದಿರುವವರೇ ಹೆಚ್ಚಾಗಿ ಈ ಮೋಸ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮೊಬೈಲ್ ನಂಬರ್, ಗೆಳೆಯರ ಮಾಹಿತಿಗಳನ್ನು ಪಬ್ಲಿಕ್ ಆಗಿ ಇಟ್ಟಿರುವವರಿಗೆ ಅಪಾಯ ಹೆಚ್ಚು.
ಮೊದಲಿಗೆ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ನೀವು ಶೇರ್ ಮಾಡಿರುವ ನಂಬರ್ ಪಡೆದು ಸುಂದರ ಹುಡುಗಿಯರು ನಿಮ್ಮ ವಾಟ್ಸಪ್ ಅಥವಾ ಫೇಸ್ಬುಕ್ ಮೆಸೆಂಜರ್ಗೆ ಸಂದೇಶಗಳನ್ನು ಕಳುಹಿಸಲು ಶುರುಮಾಡುತ್ತಾರೆ. ಇವರ ಅಂದಕ್ಕೆ ನೀವೇನಾದ್ರು ಮರುಳಾಗಿ ರಿಪ್ಲೈ ಮಾಡಿದ್ರೋ ನಿಮ್ಮ ಕಥೆ ಅಲ್ಲಿಗೆ ಮುಗಿಯುತು ಎಂದರ್ಥ. ಸ್ವಲ್ಪ ಸಮಯ ಸಭ್ಯರಂತೆ ಮಾತನಾಡುವ ಹುಡುಗಿಯರು, ಕೆಲವೇ ಕ್ಷಣಗಳಲ್ಲಿ ವಿಡಿಯೋ ಕಾಲ್ ಮಾಡಿ ಮಾತನಾಡುವಂತೆ ನಿಮ್ಮಲ್ಲಿ ಬೇಡಿಕೆ ಇಡುತ್ತಾರೆ.
ನೀವೋ, ಸುಂದರವಾದ ಹುಡುಗಿ ಅಂತ ವಿಡಿಯೋ ಕಾಲ್ ಮಾಡಿದ್ರೆ ಅಥವಾ ರಿಸೀವ್ ಮಾಡಿದ್ರೆ ಅಷ್ಟೇ ಅತ್ತ ಹುಡುಗಿ ನೋಡನೋಡುತ್ತಿದ್ದಂತೆ ಬೆತ್ತಲಾಗಿ ಬಿಡುತ್ತಾಳೆ. ಆದರೆ ಆಕೆ ಅಷ್ಟರಲ್ಲಾಗಲೇ ಆ ವಿಡಿಯೋ ಕಾಲ್ ರೆಕಾರ್ಡ್ ಮಾಡಿ ಬಿಟ್ಟಿರುತ್ತಾಳೆ, ಅದೂ ನಿಮ್ಮ ಮುಖ ಕೂಡ ಆಕೆಯ ವಿಡಿಯೋದಲ್ಲಿ ರೆಕಾರ್ಡ್ ಆಗಿರುತ್ತೆ.
ಆಕೆಗೆ ಬೇಕಿದ್ದದ್ದು ಅಷ್ಟೇ, ಮುಂದೆ ಅದೇ ವಿಡಿಯೋ ಹಿಡಿದು ಹಣಕ್ಕಾಗಿ ಬ್ಲಾಕ್ ಮೇಲ್ ಶುರು. ಹಣ ಕೊಡದೆ ಹೋದರೆ ನಿಮ್ಮ ಸಂಬಂಧಿಕರಿಗೆ ಅಥವಾ ಗೆಳೆಯರಿಗೆ ಆ ವಿಡಿಯೋ ಕಳುಹಿಸೋದಾಗಿ ಬೆದರಿಕೆ ಹಾಕುತ್ತಾಳೆ. ಒಂದು ವೇಳೆ ನೀವು ಆಕೆಯ ಮಾತಿಗೆ ಬಗ್ಗದೆ ಹಣ ಕೊಡದೇ ಹೋದರೆ ಆ ವಿಡಿಯೋ ನಿಮ್ಮ ಸಂಬಂಧಿಕರು, ಗೆಳೆಯರಿಗೆ ಕಳುಹಿಸುತ್ತಾಳೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಾರೆ. ಕ್ಷಣಿಕ ಸುಖಕ್ಕಾಗಿ ನಿಮ್ಮ ಮಾನ ಮರ್ಯಾದೆ ಕಳೆದುಬಿಡುತ್ತಾರೆ.
ಈ ಮೋಸ ಜಾಲಕ್ಕೆ ಸಿಲುಕಿ ಅದಾಗಲೇ ಅದೆಷ್ಟೋ ಜನ ಕೋಟಿ ಕೋಟಿ ಹಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಾನ ಮರ್ಯಾದೆಗೆ ಅಂಜಿ ಅದೆಷ್ಟೋ ಜನ ಪ್ರಾಣವನ್ನು ಕೂಡ ಕಳ್ಕೊಂಡಿದ್ದಾರೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಹೇಗೆ ಈ ಮೋಸ ಜಾಲ ನಡೆಯುತ್ತೆ ಎಂದು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ಸುದ್ದಿಯನ್ನು ಆದಷ್ಟು ಶೇರ್ ಮಾಡಿ, ಜಾಗೃತಿ ಮೂಡಿಸಿ.
