ರಿಕ್ಷಾ ಚಾಲಕನ ಮೇಲೆ ಮಹಿಳೆಯೊಬ್ಬರು ಕಾಲರ್ ಹಿಡಿದು ನಡುರಸ್ತೆಯಲ್ಲಿ ಕಪಾಳಮೋಕ್ಷ ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ನೋಯ್ಡಾದ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿರೋದು. ಮಹಿಳೆಯ ಕಾರಿಗೆ ಇ-ರಿಕ್ಷಾ ತಗುಲಿದ್ದು, ಕೋಪಗೊಂಡ ಮಹಿಳೆ ರಿಕ್ಷಾ ಚಾಲಕನ ಕಾಲರ್ ಪಟ್ಟಿ ಹಿಡಿದು ಕೆನ್ನೆಗೆ ಮನಬಂದಂತೆ ಬಾರಿಸಿದ್ದಾಳೆ. ಇಷ್ಟೇ ಅಲ್ಲದೆ ರಿಕ್ಷಾ ಚಾಲಕನನ್ನು ಕಾಲರ್ ಪಟ್ಟಿ ಹಿಡಿದು ಅತ್ತಿಂದಿತ್ತ ಎಳೆದಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.
ಘಟನೆ ನಡೆಯುವ ವೇಳೆ ಸ್ಥಳದಲ್ಲಿ ಜನರಿದ್ದರೂ, ರಿಕ್ಷಾ ಚಾಲಕನ ಸಹಾಯಕ್ಕೆ ಯಾರೂ ಮಧ್ಯಪ್ರವೇಶಿಸಲಿಲ್ಲ. ಅನೇಕರು ವಿಡಿಯೋ ಮಾಡುವುದರಲ್ಲಿಯೇ ತಲ್ಲೀಣರಾಗಿದ್ದರು. ಸದ್ಯ ವೀಡಿಯೋ ವೈರಲ್ ಆದ ನಂತರ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ನೋಯ್ಡಾ ಪೊಲೀಸರಿಗೆ ಆಗ್ರಹಿಸಲಾಗಿತ್ತು.
ನಂತರ ಸಂತ್ರಸ್ತ ರಿಕ್ಷಾ ಚಾಲಕ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಮಹಿಳೆ ಕಿರಣ್ ಸಿಂಗ್ ಅನ್ನು ಬಂಧಿಸಿದ್ದಾರೆ. ಪ್ರಕರಣದ ಸಂಬಂಧ ಟ್ವೀಟ್ ಮೂಲಕ ಮಾಹಿತಿ ನೀಡಿರುವ ನೋಯ್ಡಾ ಪೊಲೀಸರು, ಇ-ರಿಕ್ಷಾ ಚಾಲಕನ ದೂರಿನ ಮೇರೆಗೆ ಮಹಿಳೆಯನ್ನು ಠಾಣೆಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
