ಅಣ್ಣ ತಂಗಿಯ ಬಾಂಧವ್ಯದ ಪ್ರತೀಕವಾಗಿರುವ ರಕ್ಷಾಬಂಧನಕ್ಕೆ ಹಿಂದೂಗಳಲ್ಲಿ ವಿಶೇಷವಾದ ಮಹತ್ವವಿದೆ. ನಿನ್ನೆ ದೇಶದಾದ್ಯಂತ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗಿದೆ.
ಆದರೆ ಇದೇ ರಕ್ಷಾಬಂಧನ ಹಬ್ಬದಂದು ನಡೆದ ಘಟನೆಯೊಂದು ಇದೀಗ ಭಾರೀ ಆಕ್ರೋಷಕ್ಕೆ ಕಾರಣವಾಗಿದೆ. ರಕ್ಷಾ ಬಂಧನ ಧರಿಸಿ ಬಂದ ಮಕ್ಕಳ ಕೈಯಿಂದ ರಕ್ಷಾಬಂಧನ ಕತ್ತರಿಸಿ ತೆಗೆದು ಕಸದ ಬುಟ್ಟಿಗೆ ಹಾಕಿದ ಬಗ್ಗೆ ಶಾಲೆಯೊಂದರ ವಿರುದ್ಧ ಆರೋಪ ಕೇಳಿ ಬಂದಿದೆ.
ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ನಗರ ಹೊರವಲಯದ ಸುರತ್ಕಲ್ ಕಾಟಿಪಳ್ಳದ ಕ್ರಿಶ್ಚಿಯನ್ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಕಾಟಿಪಳ್ಳದ ಇನ್ ಫ್ಯಾಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಮಕ್ಕಳ ಕೈಯಿಂದ ರಕ್ಷೆಯನ್ನು ತೆಗೆಸಿ ಕಸದ ಬುಟ್ಟಿಗೆ ಎಸೆದಿದ್ದಾರೆ.
ಇದನ್ನು ಖಂಡಿಸಿ ಮಕ್ಕಳ ಪೋಷಕರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿದ್ದು, ಆಕ್ರೋಶಕ್ಕೆ ಮಣಿದ ಶಾಲೆಯ ಆಡಳಿತ ಮಂಡಳಿ ಮಕ್ಕಳು ಹಾಗೂ ಪೋಷಕರಲ್ಲಿ ಕ್ಷಮೆ ಕೇಳಿದೆ. ಶಿಕ್ಷಕಿಯೊಬ್ಬರ ಬೇಜವಾಬ್ದಾರಿಯಿಂದ ಘಟನೆ ನಡೆದಿದ್ದು, ಇನ್ನು ಮುಂದೆ ಇಂತಹ ಘಟನೆ ನಡೆಯುವುದಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.
ಇಷ್ಟೇ ಅಲ್ಲದೆ ಶಾಲೆಯಲ್ಲಿರುವ ಚರ್ಚ್‌ನ ಫಾದರ್ ಮಕ್ಕಳ ಪೋಷಕರಿಂದಲೇ ರಕ್ಷಾ ಬಂಧನ ಕಟ್ಟಿಸಿಕೊಂಡರು. ಹೀಗೆ ಹಿಂದೂಗಳ ಆಚರಣೆಯನ್ನು ವಿರೋಧ ಮಾಡಲು ಹೋದ ಕ್ರಿಶ್ಚಿಯನ್ ಶಾಲೆಗೆ ಮಕ್ಕಳ ಪೋಷಕರು ಸರಿಯಾದ ಪಾಠವನ್ನೇ ಕಲಿಸಿದ್ದಾರೆ.
