2017 ರಲ್ಲಿ ಉತ್ತರಕನ್ನಡ ಜೆಲ್ಲೆಯಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಪರೇಶ್ ಮೇಸ್ತಾ ಎಂಬ ಹಿಂದೂ ಸಂಘಟನೆ ಕಾರ್ಯಕರ್ತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಅನ್ಯಕೋಮಿನವರು ಯುವಕನನ್ನು ಹತ್ಯೆ ಮಾಡಿ ಕೆರೆಯಲ್ಲಿ ಎಸೆದಿದ್ದಾರೆ ಎಂಬುದು ಹಿಂದೂ ಸಂಘಟನೆಗಳ ಆರೋಪವಾಗಿತ್ತು.
ಪರೇಶ್ ಮೇಸ್ತಾ ಹತ್ಯೆ ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಆಗಿದ್ದರಿಂದ ತಮ್ಮನ್ನು ತಾವು ಹಿಂದುತ್ವವಾದಿ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿ ನಾಯಕರು ಉತ್ತರಕನ್ನಡ ಜಿಲ್ಲೆಗೆ ಸಾಲುಸಾಲಾಗಿ ಬಂದು ಪ್ರತಿಭಟನೆ ನಡೆಸಿ ಹಂತಕರಿಗೆ ಶಿಕ್ಷೆ ಕೊಡಿಸುವಂತೆ ಕೇಳಿಕೊಂಡಿದ್ದರು.
ಹಿಂದೂ ಸಂಘಟನೆ ಒತ್ತಡಕ್ಕೆ ಮಣಿದ ಅಂದಿನ ಕಾಂಗ್ರೆಸ್ ಸರ್ಕಾರ ತನಿಖೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಯುವಕನ ಹತ್ಯೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಜಮಾಲ್ ಅಜಾದ್ ಅಣ್ಣಿಗೇರಿ ಎಂಬಾತನನ್ನು ಎ1 ಆರೋಪಿಯನ್ನಾಗಿ ಮಾಡಿ ಬಂಧಿಸಿದ್ದರು.
ಇದೀಗ ಪರೇಶ್ ಮೇಸ್ತಾ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಅಜಾದ್ ಅಣ್ಣಿಗೇರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲೇ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಿಂದ ಬಿಜೆಪಿ ವಿರುದ್ಧ ರೊಚ್ಚಿಗೆದ್ದಿರುವ ಕಾರ್ಯಕರ್ತರಿಗೆ ಇದೀಗ ಹಿಂದೂ ಹತ್ಯಾ ಆರೋಪಿಗೆ ರಾಜಾತಿಥ್ಯ ನೀಡಿರುವ ಬಿಜೆಪಿ ಸರ್ಕಾರದ ನಡೆ ಬೆಂಕಿಗೆ ತುಪ್ಪ ಸುರಿದ ಹಾಗಾಗಿದೆ.
ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅಜಾದ್ ಅಣ್ಣಿಗೇರಿಯನ್ನು ವಕ್ಫ್ ಬೋರ್ಡ್ ಉಪಾಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬೆಜೆಪಿಯ ಹಿಂದುತ್ವದ ನಕಲಿ ಮುಖವಾಡ ಒಂದೊಂದಾಗಿ ಕಳಚಲು ಶುರುವಾಗಿದೆ. ಹೀಗೇ ಮುಂದುವರೆದರೆ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಮೂಲೆ ಸೇರುವುದರಲ್ಲಿ ಸಂಶಯವಿಲ್ಲ.