ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿ ಕೊಂದಿರುವ ಘಟನೆ ಒಡಿಶಾದ ಕೋರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ನಡೆದಿದೆ. ವೃದ್ಧನ ಕುಟುಂಬಸ್ಥರೇ ಕ್ಷುಲ್ಲಕ ಕಾರಣಕ್ಕೆ ಮರದ ದೊಣ್ಣಿಗಳಿಂದ ಅಮಾನವೀಯವಾಗಿ ಹೊಡೆದು ಹತ್ಯೆ ಮಾಡಿದ್ದಾರೆ.
ಮೃತ ವ್ಯಕ್ತಿಯನ್ನು ಕುರ್ಷಾ ಮಣಿಯಕ್ಕ ಎಂದು ಗುರುತಿಸಲಾಗಿದ್ದು, ವೈಯಕ್ತಿಕ ಜಗಳದಿಂದಾಗಿ ವೃದ್ಧ ತನ್ನ ಮಗನ ಮನೆಯ ಹಂಚನ್ನು ಹೊಡೆದು ಹಾಕಿದ್ದ. ಇದು ವೃದ್ಧ ಹಾಗೂ ಕುಟುಂಬಸ್ಥರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.
ಕೊನೆಗೆ ಮಣಿಯಕ್ಕನ್ ಸಹೋದರ, ಮಗ ಹಾಗೂ ಸೊಸೆ ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಮರದ ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ. ನೋವು ತಾಳಲಾರದೆ ವೃದ್ಧ ಬಿಟ್ಟುಬಿಡುವಂತೆ ಅಂಗಲಾಚಿದ್ರು ಅಲ್ಲಿದ್ದವರ ಮನಸ್ಸು ಕರಗಲಿಲ್ಲ.
ಥಳಿತದಿಂದಾಗಿ ವೃದ್ಧ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಸುಟ್ಟು ಹಾಕಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂದಿಸಿದ್ದಾರೆ.