ಬೈಕಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಬೃಹತ್ ಮರ ಬಿದ್ದು, ವ್ಯಕ್ತಿ ನರಳಾಡಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ರಸ್ತೆಯ ಮಾಳೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕಲ್ಲೇಸೋಮನಹಳ್ಳಿ ಗ್ರಾಮದ ರಂಗಶೆಟ್ಟಿ (40) ಎಂದು ಗುರುತಿಸಲಾಗಿದ್ದು, ಇವರು ತಮ್ಮ ಬೈಕ್‌ನಲ್ಲಿ ಚನ್ನರಾಯಪಟ್ಟಣದಿಂದ ಕಲ್ಲೇಸೋಮನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಮಾಳೆಕೊಪ್ಪಲು ಗ್ರಾಮದ ಬಳಿ ಬೃಹತ್ ಗಾತ್ರದ ಮರವೊಂದು ರಂಗಶೆಟ್ಟಿ ಅವರು ಚಲಾಯಿಸುತ್ತಿದ್ದ ಬೈಕ್ ಮೇಲೆ ಬಿದ್ದಿದೆ.
ರಂಗಶೆಟ್ಟಿಯವರು ಬೈಕ್ ಹಾಗೂ ಮರದ ನಡುವೆ ಸಿಲುಕಿ ಅರ್ಧಗಂಟೆಗೂ ಹೆಚ್ಚು ನರಳಾಡಿ ಅಲ್ಲಿದ್ದವರಲ್ಲಿ ರಕ್ಷಿಸುವಂತೆ ಅಂಗಲಾಚಿದ್ದಾರೆ. ಕೂಡಲೇ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ ಬೃಹತ್‌ಗಾತ್ರದ ಮರವನ್ನು ಜನರಿಂದ ತೆರವುಗೊಳಿಸಲು ಅಸಾಧ್ಯವಾಗಿತ್ತು. ಸ್ಥಳಕ್ಕೆ ಆಸ್ಪತ್ರೆಯ ಸಿಬ್ಬಂದಿ ಬಂದು ಪ್ರಥಮ ಚಿಕಿತ್ಸೆ ನೀಡಿದರಾದರೂ ಬೈಕ್ ಸವಾರನನ್ನು ಜೀವಂತವಾಗಿ ಉಳಿಸಲು ಸಾಧ್ಯವಾಗಲಿಲ್ಲ.
ರಂಗಶೆಟ್ಟಿ ಜೀವ ರಕ್ಷಣೆಗಾಗಿ ಅಂಗಲಾಚುತ್ತಿದ್ದ ದೃಶ್ಯ ಕಂಡು ಸ್ಥಳದಲ್ಲಿದ್ದವರು ಕಣ್ಣಂಚಲ್ಲಿ ನೀರು ತರಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ಜೆಸಿಬಿ ಹಾಗೂ ಹಿಟಾಚಿ ಯಂತ್ರ ಬಳಸಿ ಮರ ತೆರವುಗೊಳಿಸುವದರೊಳಗೆ ರಂಗಶೆಟ್ಟಿಯವರು ನರಳಾಡಿ ಪ್ರಾಣ ಬಿಟ್ಟಿದ್ದರು.
ಮೃತದೇಹವನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೈಕ್ ಸವಾರ ಸಾವನ್ನಪ್ಪಲು ಅರಣ್ಯ ಇಲಾಖೆಯೇ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಕೆಲಕಾಲ ರಸ್ತೆ ತಡೆದು, ರಸ್ತೆಯಿಂದ ಮರ ತೆರವುಗೊಳಿಸಲು ಬಿಡದೆ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆಯ ವಿರುದ್ಧ ದಿಕ್ಕಾರ ಕೂಗಿದರು.