ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಪುಟ್ಟ ಬಾಲಕಿ ಸಮನ್ವಿ ಸಾವಿಗೆ ಚಾಕಲೇಟ್ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದ್ದೆ ಕಾರಣ ಎಂದು ನಂಬಲಾಗಿತ್ತು. ಆದರೆ ಇದೀಗ ಬಂದಿರುವ ವೈದ್ಯಕೀಯ ವರದಿಯಲ್ಲಿ ಪುಟ್ಟ ಬಾಲಕಿಯ ಸಾವಿನ ಅಸಲಿ ಕಾರಣ ಬಯಲಾಗಿದೆ.
ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದ ಪುಟಾಣಿ ಸಮನ್ವಿ ಸಾವಿಗೆ ಇಡೀ ದೇಶವೇ ಮರುಕಪಟ್ಟಿತ್ತು. ಇದೀಗ ವೈದ್ಯಕೀಯ ವರದಿಯಲ್ಲಿ ವಿದ್ಯಾರ್ಥಿನಿ ಸಮನ್ವಿ ಸಾವಿನ ರಹಸ್ಯ ಬಯಲಾಗಿದ್ದು, ಹುಟ್ಟಿನಿಂದಲೇ ಆಕೆಗೆ ಹೃದಯ ಸಂಬಂಧಿ ಸಮಸ್ಯೆಯಿತ್ತು ಎಂದು ತಿಳಿದುಬಂದಿದೆ.
ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಕಬ್ಸೆಯ ಸುಪ್ರೀತಾ ಪೂಜಾರಿ ಎಂಬುವರ ಮಗಳು ಸಮನ್ವಿ(6) ಕಳೆದ ಜುಲೈ 20ರಂದು ನಿಗೂಢವಾಗಿ ಸಾವನ್ನಪ್ಪಿದ್ದಳು. ಶಾಲೆಗೆ ಹೊರಡುವ ಸಂದರ್ಭದಲ್ಲಿ ಹಠ ಮಾಡಿದ್ದಕ್ಕೆ ಸಮಾಧಾನಪಡಿಸಲು ತಾಯಿ ಚಾಕಲೇಟ್ ನೀಡಿದ್ದು, ಈ ಚಾಕಲೇಟ್ ಗಂಟಲಲ್ಲಿ ಸಿಲುಕಿ ಮೃತಪಟ್ಟಿರಬಹುದು ಎಂದೇ ಇಲ್ಲಿವರೆಗೆ ತಿಳಿಯಲಾಗಿತ್ತು.
ಬೈಂದೂರು ಪೊಲೀಸರು ಮಣಿಪಾಲದಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು FSL ವರದಿಗಾಗಿ ಕಳಿಸಲಾಗಿತ್ತು. ಇದೀಗ ಬಾಲಕಿಯ FSL ವರದಿಯು ಪೊಲೀಸರ ಕೈ ಸೇರಿದ್ದು, ಬಾಲಕಿಯು ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ದೃಢಪಟ್ಟಿದೆ.