ವಿದ್ಯಾರ್ಥಿನಿಯನ್ನು ಚುಡಾಯಿಸಿದ್ದಕ್ಕೆ ವಿದ್ಯಾರ್ಥಿಗಳ ಗುಂಪುಗಳು ಪರಸ್ಪರ ಬಡಿದಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿವಿಯ ಆವರಣದಲ್ಲಿ ನಡೆದಿದೆ. ಘಟನೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದರ ಬಗ್ಗೆ ಕೇಂದ್ರೀಯ ವಿವಿ ಶಿಸ್ತು ಸಮಿತಿಯು ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಕಳೆದ ಆಗಸ್ಟ್ 2ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿವಿಯ ಕ್ಯಾಂಪಸ್ ಒಳಗಿನ ಮೆಸ್‌ನಲ್ಲಿ ವಿದ್ಯಾರ್ಥಿಗಳು ಊಟ ಮಾಡುವ ವೇಳೆ ಇನ್ನೊಂದು ಗುಂಪು ಏಕಾಏಕಿ ಕೆಲ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡಿರುವಂತಹ ದೃಶ್ಯಗಳು ಇದೀಗ ವೈರಲ್ ಆಗಿವೆ.
ಹೊಡೆದಾಟದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳಲ್ಲಿ ಬಹುಪಾಲು ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ, ದೆಹಲಿ ರಾಜ್ಯದ ವಿದ್ಯಾರ್ಥಿಗಳೇ ಇದ್ದಾರೆಂದು ಗೊತ್ತಾಗಿದೆ. ವೈರಲ್ ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬನನ್ನು ಗುಂಪೊಂದು ನೆಲಕ್ಕೆ ಕೆಡವಿ ಒದೆಯುವ, ಕೂದಲು ಹಿಡಿದು ಹಲ್ಲೆ ಮಾಡುತ್ತಿರುವ ದೃಷ್ಯಗಳು ದಾಖಲಾಗಿವೆ.
ಉತ್ತರ ಭಾರತ ಮೂಲದ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ವಿದ್ಯಾರ್ಥಿ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಈ ಬಗ್ಗೆ ವಿದ್ಯಾರ್ಥಿನಿಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರಿಗೂ ಮೌಖಿಕವಾಗಿ ದೂರು ನೀಡಿದ್ದಾರೆಂದು ಗೊತ್ತಾಗಿದೆ.
ಘಟನೆ ಬಗ್ಗೆ ಮಾತನಾಡಿದ ಸಿಯುಕೆ ಕುಲಸಚಿವ ಪ್ರೊ. ಬಸವರಾಜ ಡೋಣೂರ ಅವರು, ‘ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ವಿದ್ರಾರ್ಥಿಗಳು ವೈಯಕ್ತಿಕ ಕಾರಣಕ್ಕಾಗಿ ಜಗಳವಾಗಿರುವ ಸಾಧ್ಯತೆ ಇದೆ. ಈ ಘಟನೆ ಭಾಷೆ ಅಥವಾ ವೇಷ ಭೂಷಣದ ಕುರಿತು ನಡೆದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ವರದಿ ಕೈ ಸೇರಿದ ನಂತರವಷ್ಟೇ ನಿಖರ ಕಾರಣ ಗೊತ್ತಾಗಲಿದೆ. ಆ ನಂತರ ಶಿಸ್ತು ಸಮಿತಿ ನಿಯಮಗಳಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ಎಂದು ತಿಳಿಸಿದರು.